ಹರಿಹರ ಆರೋಗ್ಯ ಮಾತೆಯ ಹಬ್ಬದ ಶುಭಾಶಯಗಳು – 2016

ಬೈಬಲ್ ಬೆಳಕು

-  ವಂ || ಫಾ || ಫ್ರಾಂಕ್ಲಿನ್ ಡಿಸೋಜಾ, ಹರಿಹರ.

“ನಿಮ್ಮ ವಿಶ್ವಾಸ ಕುಸಿಯದಂತೆ ಎಚ್ಚರವಹಿಸಿರಿ”  (ಯೊವಾನ್ನ – 16:1)

1.    ಯೇಸು ಕೊಟ್ಟ ಎಚ್ಚರಿಕೆ ಇಂದು ನಿಜವಾಗಿದೆ :

“ನಿಮ್ಮ ವಿಶ್ವಾಸ ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಜನರು ನಿಮ್ಮನ್ನು ಪ್ರಾರ್ಥನಾ ಮಂದಿರದಿಂದ ಬಹಿಷ್ಕರಿಸುವರು. ಅಷ್ಟೇ ಅಲ್ಲಾ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟನೆಂದು ಭಾವಿಸುವ ಕಾಲವೂ ಬರಲಿದೆ. ನನ್ನನಾಗಲಿ, ಪಿತನನ್ನಾಗಲಿ ಅವರು ಅರಿತಿಲ್ಲದ ಕಾರಣ ನಿಮಗೆ ಹೀಗೆ ಮಾಡುವರು.” – ಯೊವಾನ್ನ 16:1-3.

ಪ್ರಸಕ್ತ ಜಗತ್ತಿನಲ್ಲಿ ವಿಶೇಷವಾಗಿ ಸಿರಿಯಾ, ಲಿಬಿಯಾ, ಇರಾಕ್, ನೈಜೀರಿಯಾ ಹಾಗೂ ಅನೇಕ ಕಡೆ ಯೇಸುವನ್ನು ವಿಶ್ವಾಸಿಸುವವರು ಎಂಬ ಕಾರಣಕ್ಕೆ ಅನುಭವಿಸುವ ಹಿಂಸೆ ಯೇಸು ಅಂದೇ ಕೊಟ್ಟ ಎಚ್ಚರಿಕೆಯ ಭಾಗವಾಗಿದೆ. ಎಚ್ಚರ! ಎಚ್ಚರ! ವಿಶ್ವಾಸ ಕುಸಿಯದಂತೆ ಎಚ್ಚರವಾಗಿರಿ.

2.    ವಿಶ್ವಾಸ ಎಂದರೇನು?

“ವಿಶ್ವಾಸ ಎಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢ ನಂಬಿಕೆ ಹಾಗೂ ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದುವು ಎಂಬ ನಿಲುವು ಆಗಿದೆ.” – ಇಬ್ರಿಯರಿಗೆ 11:1.

3.    ವಿಶ್ವಾಸದಲ್ಲಿ ಸ್ಥಿರವಾಗಿರಿ:

“ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ” – ಯೆಶಾಯ 7:9. ಪ್ರಸಕ್ತ ಜೀವನದಲ್ಲಿ, ಕುಟುಂಬದಲ್ಲಿ ಹಾಗೂ ದೇವಾಲಯ ಸಮೂಹಗಳಲ್ಲಿ ಇರುವ ಕೊರತೆ ವಿಶ್ವಾಸದ ಕೊರತೆ. ಈ ದಯೆಯ ವರುಷದಲ್ಲಿ ನಮ್ಮ ಸಮೂಹಗಳ ವಿಶ್ವಾಸವನ್ನು ಬಲಪಡಿಸುವತ್ತ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ಆಗ ನಾವು ಅದ್ಭುತಗಳನ್ನು ಕಾಣುತ್ತೇವೆ.

4.    ವಿಶ್ವಾಸದ ಸ್ಥಿರತೆಗಿರುವ ಕೊರತೆ, ಸೊಕ್ಕು :

ಕೀರ್ತನೆ 10:4 “ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ, ಅವನ ಮನದೊಳಿದೊಂದೇ ಭಾವನೆ; “ದೇವರೇ ಇಲ್ಲ”. ಯೆರೇಮಿಯಾ 17:5 “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು”. ಸೊಕ್ಕು / ಅಹಂಕಾರ / ಗರ್ವ ಇವು ನಮ್ಮ ವಿಶ್ವಾಸವನ್ನು ನಾಶಪಡಿಸುವ ಕ್ಯಾನ್ಸರ್, ದೀನತೆ, ವಿನಯತೆ, ಸರಳತೆ, ಉದಾರತೆ ಹಾಗೂ ಪ್ರಾಮಾಣಿಕತೆ ವಿಶ್ವಾಸವನ್ನು ಬಲಪಡಿಸುವ ಮದ್ದು. ಕೊರತೆ ನೀಗಿಸಿ ಸ್ಥಿರತೆಯೆಡೆಗೆ ಬರಬೇಕಾದರೆ ಪಶ್ಚಾತ್ತಾಪಭರಿತ ಹೃದಯ ಅತ್ಯಗತ್ಯ. ಈ ಮೂಲಕ ನಾವು ಪ್ರಭುವಿನಲ್ಲಿ ಆಳವಾದ ಅನುಭವವನ್ನು ಪಡೆಯಬಹುದು.

5.    ದೇವರ ವಾಕ್ಯ ಹಾಗೂ ಆಜ್ಞೆಗಳಲ್ಲಿ ವಿಶ್ವಾಸಿಸಬೇಕು :

ಜ್ಞಾನೋಕ್ತಿ 13:13 “ದೇವ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು”

ಜ್ಞಾನೋಕ್ತಿ 19:16 “ದೈವಾಜ್ಞೆಯನ್ನು ಪಾಲಿಸುವವನು ತನ್ನನ್ನೇ ಕಾಪಾಡಿಕೊಳ್ಳುವನು; ದೈವ ವಾರ್ತೆಯ ಬಗ್ಗೆ ಅಜಾಗ್ರತನಾಗಿರುವವನು ಸಾಯುವನು”.

ಈ ಎರಡು ಎಚ್ಚರಿಕೆಂiÀi ಜ್ಞಾನೋಕ್ತಿಗಳು ನಾವು ಗಂಭೀರವಾಗಿ ಪರಿಗಣಿಸಬೇಕು. ದೇವರ ವಾಕ್ಯದಲ್ಲಿ ಆಳವಾದ ನಂಬಿಕೆ, ಬಲವಾದ ವಿಶ್ವಾಸ ಹಾಗೂ ದಶಾಜ್ಞೆಗಳನ್ನು ಪಾಲಿಸಿ ಜೀವಿಸುವುದು ನಮ್ಮ ವಿಶ್ವಾಸ ಕುಸಿಯದಂತೆ ತಡೆಯುತ್ತದೆ.

6.    ಯೌವನದಲ್ಲಿ ರೂಪುಗೊಂಡ ವಿಶ್ವಾಸ ಮುಪ್ಪಿಗೆ ಆಶೀರ್ವಾದ:

ಸಿರಾಖ 25:3 “ಯೌವನದಲ್ಲಿ ನೀನು ಏನನ್ನು ಕೂಡಿಸಿಟ್ಟುಕೊಳ್ಳದಿದ್ದಾರೆ, ಮುಪ್ಪಿನ ಕಾಲದಲ್ಲಿ ಹೇಗೆ ಪಡೆದುಕೊಳ್ಳುವೆ?”

ವಿಶ್ವಾಸ ರೂಪುಗೊಳ್ಳುವುದು ಕುಟುಂಬದಿಂದ, ಬಾಲ್ಯದಲ್ಲೇ, ತಂದೆ-ತಾಯಿ ಮಕ್ಕಳ್ಳನ್ನು ಶಿಕ್ಷಣ, ಮನೆಪಾಠ ಅಥವಾ ಇನ್ನಿತರೆ ಲೌಕಿಕ ಸಾಧನಗಳಲ್ಲಿ ಮಾತ್ರ ಅವರನ್ನು ಬೆಳಸದೆ ಪ್ರಭು ಯೇಸುಕ್ರಿಸ್ತರಲ್ಲಿನ ವಿಶ್ವಾಸದಲ್ಲಿ, ಪ್ರಾರ್ಥನೆ – ಜಪತಪದ ಮೂಲಕ ಅವರ ಬಾಲ್ಯದಲ್ಲಿ ರೂಪಿಸಬೇಕು. ಯೌವನಸ್ಥರು, ಬಾಲ್ಯವಸ್ಥೆಯಿಂದ ಯೌವನಾವಸ್ಥೆಗೆ ಬಂದಾಗ ವಿಶ್ವಾಸದಲ್ಲಿ ಸದೃಢವಾಗಿರಬೇಕು. ಅಂದರೆ ಸಂಸ್ಕಾರಗಳ ಮಹತ್ವ ಅರಿತು ಪರಮ ಪ್ರಸಾದ ಮತ್ತು ಪಶ್ಚಾತ್ತಾಪ ಈ ಸಂಸ್ಕಾರಗಳನ್ನು ಸ್ವೀಕರಿಸಿ, ಅದರ ಮಹತ್ವ ಅರಿತು ಬಾಳಬೇಕು. ಆಗ ಅವರ ಜೀವನ, ಯಶಸ್ಸು ಹಾಗೂ ಮುಪ್ಪು ಆಶೀರ್ವಾದಗೊಳ್ಳುತ್ತೆ. “ಯೌವನದಲ್ಲಿ ನಿನ್ನ ಸೃಷ್ಟಿ ಕರ್ತನನ್ನು ಸ್ಮರಿಸಿಕೊ” (ಉಪದೇಶಕ 12:1)

7.    ದೇವರಲ್ಲಿ ವಿಶ್ವಾಸಿಸಿದಾಗ ವಾಗ್ದಾನದ ಆಶೀರ್ವಾದಗಳು:

ಜ್ಞಾನೋಕ್ತಿ 16:20 “ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು”.

ಜ್ಞಾನೋಕ್ತಿ 9:11 “ನನ್ನಿಂದ ಸಿಗುವುದು ದೀರ್ಘಾಯಸ್ಸು; ವೃದ್ಧಿಯಾಗುವುದು ನಿನ್ನ ಜೀವದ ಅವಧಿ”.

ಯೆರೇಮಿಯ 33:6 “ಆದರೂ ಈ ನಗರವನ್ನು ಉದ್ಧಾರ ಮಾಡಿ, ಸುಧಾರಿಸಿ, ಇದರ ನಿವಾಸಿಗಳನ್ನು ಗುಣಪಡಿಸುವೆನು. ಸಮೃದ್ಧಿಯಾದ ಸೌಭಾಗ್ಯವನ್ನು ಹಾಗೂ ಶಾಂತಿ ಸಮಾಧಾನವನ್ನು ಇವರಿಗೆ ಅನುಗ್ರಹಿಸುವೆನು”.

ಯೆಶಾಯ 46:4 “ನಾನೇ ನಿಮಗೆ ಆಧಾರ ಮುಪ್ಪಿನ ತನಕ. ಹೊತ್ತು ಸಲಹುವೆನು ನಿಮ್ಮನ್ನು ನರೆ ಬಂದಾಗ, ಉಂಟು ಮಾಡಿದವನು ನಾನೇ, ಹೊರುವವನು ನಾನೇ. ಹೌದು ನಿಮ್ಮನ್ನು ಹೊತ್ತು ಸಲಹುವವನು ನಾನೇ”

ಕೀರ್ತನೆ 147:3 “ವಾಸಿಮಾಡುವನು ಮುರಿದ ಮನಸ್ಸುಳವರನು, ಕಟ್ಟಿ ಗುಣಪಡಿಸುವನು ಅವರ ಗಾಯಗಳನು”.

 

ಪ್ರಾರ್ಥಿಸೋಣ:

“ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವೂ ನಿತ್ಯಕ್ಕೂ ಕೋಪಿಸದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆ ತೋರಿ. ನಮ್ಮ ಅಪರಾಧಗಳನ್ನು ಅಳಿಸಿ ಬಿಡಿ; ಅವನ್ನು ತೆಗೆದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ಯಾಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ” (ಮಿಕ 7:18-20)

ಪ್ರಭು ಯೇಸುವೇ ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ.

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: hariharshrine@gmail.com
hariharmatha@gmail.com

Fr. George K.A. : +91-99454 46312

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka