ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ, ಹರಿಹರ.
ಹರಿಹರದ ಆರೋಗ್ಯಮಾತೆ ನಮ್ಮ ಆಶ್ರಯದಾತೆ
- ವಂ. ಫಾ|| ಪ್ರಾಂಕ್ಲಿನ್ ಡೀಸೋಜಾ , ಹರಿಹರ.
ಅಂದಿನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಇಗ್ನೇಶಿಯಸ್ ಪಿಂಟೊ ರವರು 1994-1995 ರಲ್ಲಿ ರಿಜೆನ್ಶಿಗೆಂದು (ಒಂದು ವರ್ಷದ ಅನುಭವ) ನನ್ನನ್ನು ಹರಿಹರ ಧರ್ಮಕೇಂದ್ರಕ್ಕೆ ನೇಮಿಸಿದ್ದರು. ವಂ. ಸ್ವಾಮಿ ಜೇಸು ರಕ್ಷಕನಾದನ್ ಅವರು ವಿಚಾರಣಾ ಗುರುವಾಗಿದ್ದು ಆ ಸಮಯದಲ್ಲಿ ಅವರ ಮಾರ್ಗದರ್ಶನದಲ್ಲಿ ದೇವರ ವಾಕ್ಯದ ಮಹತ್ವವನ್ನು ನಾನು ಅನುಭವಿಸಿದ ವರ್ಷ. ಇದೇ ಕಳೆದ 17 ವರುಷಗಳ ಗುರುಜೀವನಕ್ಕೆ ನನಗೆ ಸ್ಪೂರ್ತಿಯಾಯಿತು ಹಾಗೂ ಸುವಾರ್ತಾ ಸೇವೆಯಲ್ಲಿ ಬಲಗೊಳ್ಳಲು ಸಹಾಯವಾಯಿತು. ಇದಕ್ಕೆಲ್ಲಾ ಹರಿಹರ ಆರೋಗ್ಯ ಮಾತೆಯ ಭಿನ್ನಹವೇ ಕಾರಣ ಎಂದರೆ ತಪ್ಪಾಗಲಾರದು. ಇಂದು ಅದೇ ಮಾತೆಯ ಪವಿತ್ರ ಸ್ಥಳದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದಲ್ಲಿ ಆಕೆಯ ಕರೆಯೆಂದೇ ನಾನು ನಂಬಿರುತ್ತೇನೆ. ಈ ಧರ್ಮಕೇಂದ್ರದ ವಿಶ್ವಾಸಿಗಳ ಪ್ರೀತಿ, ಪ್ರಾರ್ಥನೆ ಹಾಗೂ ಸಂಪೂರ್ಣ ಸಹಕಾರ, ಹರಿಹರದ ಆರೋಗ್ಯ ಮಾತೆಯ ಹಬ್ಬದ ಯಶಸ್ಸಿಗೆ ಹಾಗೂ ಈ ಪುಣ್ಯಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿದೆ. ತ್ರೈಯೇಕ ದೇವರಿಗೆ ಮಹಿಮೆಯಾಗಲಿ.
1. ತಾಯಿ ಮರಿಂiÀi ದೇವರಿಂದ ಆಯ್ಕೆಯಾದ ತಾಯಿ – (ಲೂಕ – 1:28)
ದೇವದೂತನು ಆಕೆಯ ಬಳಿ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೋಡನೆ ಇದ್ದಾರೆ”! ಎಂದನು. ಮರಿಯಳನ್ನ ಆಯ್ಕೆ ಮಾಡಿದ್ದು ಪಿತ ದೇವರೇ ಆಗಿದ್ದಾರೆ. ಮೊದಲ ತಾಯಿ ಹವ್ವಳಿಂದ ಬಂದ ಪಾಪವನ್ನು ತೊಳೆಯಲು, ಎರಡನೇ ಹವ್ವ ಮರಿಯಳನ್ನು ದೇವರು ಆಯ್ಕೆ ಮಾಡಿದರು. ಆಕೆ ದೇವರ ಕರೆಯನ್ನು ಸ್ವೀಕರಿಸಿ, ದೇವರಿಗೆ ವಿಧೇಯರಾದರು.
2. ದೇವರ ಯೋಜನೆಗೆ ಸಮ್ಮತಿಸಿದ ತಾಯಿ – (ಲೂಕ – 1:29-36)
ದೇವದೂತನು ಆಕೆಗೆ ದೇವರ ಅನುಗ್ರಹ ನಿನಗೆ ಲಭಿಸಿದೆ, ನೀನು ಒಬ್ಬ ಮಗನನ್ನು ಹೆರುವೆ, ಆತ ದೇವರ ಪುತ್ರ, ಆತನ ಹೆಸರು ಯೇಸು, ಆತ ಚಿರಕಾಲ ಆಳುವನು, ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು, ಎಂದನು. ಅದಕ್ಕೆ ಮರಿಯಳು ‘ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷರ ಸಂಸರ್ಗವೂ ಇಲ್ಲವಲ್ಲಾ? ಎಂದು ವಿಚಾರಿಸಿದಾಗ, ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು, ಈ ಕಾರಣ ನಿನ್ನಲ್ಲಿ ಹುಟ್ಟುವ ಮಗು ‘ಪವಿತ್ರಶಿಶು’ – ‘ದೇವರ ಪುತ್ರ’ ಎನಿಸಿಕೊಳ್ಳುವನು. ತದನಂತರ ದೇವದೂತನು ಬಂಜೆ ಎನಿಸಿಕೊಂಡಿದ್ದು ಎಲಿಜಬೇತಳು ಗರ್ಭಿಣಿಯಾಗಿದ್ದ ವಿಚಾರವನ್ನು ತಿಳಿಸುತ್ತಾನೆ. ಈ ಮೂಲಕ ಆಕೆ ದೇವರ ಯೋಜನೆಗೆ ಸಮ್ಮತಿಸುತ್ತಾರೆ.
3. ದೇವರ ವಾಕ್ಯಕ್ಕೆ ಶಿರಬಾಗಿದ ತಾಯಿ – (ಲೂಕ – 1:38)
“ಇಗೋ ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ” ಎಂದಳು. ದೇವರ ವಾಕ್ಯದಲ್ಲಿ ಅನನ್ಯ ಭರವಸೆ ಆಕೆ ತೋರ್ಪಡಿಸಿದಳು. ತನ್ನನ್ನೆ ಸಂಪೂರ್ಣ ದೇವರಿಗೆ ಅರ್ಪಿಸಿದರು. ಆಕೆಯ ‘ಹೌದು ನಿಮ್ಮ ಮಾತಿನಂತೆ ನಡೆಯಲಿ’ ಇದೊಂದು ಸುಲಭದ ಉತ್ತರವಲ್ಲ, ರಕ್ಷಣೆಯ ಉತ್ತರ. ಮೊದಲ ಹವ್ವಳು ದೇವರ ಮಾತನ್ನು ಮೀರಿದಳು. ತಾಯಿ ಮರಿಯಮ್ಮ ದೇವರ ಮಾತಿಗೆ ವಿಧೇಯರಾದರು. ರಕ್ಷಣೆಯ ತತ್ವ ಹಾಗೂ ಸತ್ವವೇ ವಿಧೇಯತ್ವ.
4. ದೇವರ ವಾಕ್ಯವನ್ನು ಉದರದಲ್ಲಿ ಹೊತ್ತ ತಾಯಿ – (ಲೂಕ – 1:42-45)
“ಸ್ತ್ರೀಯರಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀವು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು”. ಎಲಿಜಬೇತಮ್ಮಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೇಳಿದ ಮಾತುಗಳಿವು. ದೇವರ ವಾಕ್ಯವನ್ನು ಹೃದಯದಲ್ಲೂ, ಉದರದಲ್ಲೂ ಸ್ವೀಕರಿಸುವ ಭಾಗ್ಯ ತಾಯಿ ಮರಿಯಮ್ಮನವರಿಗೆ ಸಿಕ್ಕಿತು.
5. ಮರಿಯಳ ಸ್ತುತಿಗೀತೆ ಆಕೆಯ ದೀನತೆಯನ್ನು ಎತ್ತಿ ಹಿಡಿಯುತ್ತೆ – (ಲೂಕ – 1:46-56)
ಇಡೀ ಸ್ತುತಿಗೀತೆಯಲ್ಲಿ ಮರಿಯಮ್ಮನವರು ದೇವರಿಗೆ ಮಹಿಮೆ ಸಲ್ಲಿಸುತ್ತಾರೆ. ದೇವರ ಮಹಾತ್ಕಾರ್ಯಗಳನ್ನು ಕೊಂಡಾಡುತ್ತಾರೆ. ಹಾಗೂ ಆಕೆ ಹೇಗೆ ದೇವರು ದೀನ-ದಲಿತರಿಗೆ ದಯೆ ತೋರಿಸುತ್ತಾರೆ ಎಂಬುದಾಗಿ ಹೃದಯದಿಂದ ಹೇಳುವಂತದ್ದು ನಾವು ಈ ಸ್ತುತಿಗೀತೆಯಲ್ಲಿ ಕಾಣುತ್ತೇವೆ. ಈ ಸ್ತುತಿಗೀತೆ ಆಕೆಯ ಹೃದಯ ಸಿರಿವಂತಿಕೆಯನ್ನು ಎತ್ತಿ ಹಿಡಿಯುತ್ತದೆ.
6. ಯೇಸು ಹೇಳಿದಂತೆ ಕೇಳಿ ಎಂದ ತಾಯಿ – (ಯೊವಾನ್ನಾ – 2:5)
ಗಲಿಲೇಂiÀiದ ಕಾನಾ ಎಂಬ ಊರಿನಲ್ಲಿ ನಡೆದ ವಿವಾಹದ ಸಮಾರಂಭದಲ್ಲಿ, ಕೊರತೆಯಾದ ದ್ರಾಕ್ಷಾರಸವನ್ನು ತನ್ನ ಪುತ್ರನಲ್ಲಿ ಬಿನೈಸುವುದರ ಮೂಲಕ; ಯೇಸು ಮೊದಲ ಸೂಚಕ ಕಾರ್ಯವನ್ನು ಮಾಡಲು ಪ್ರೇರೇಪಿಸಿದ ತಾಯಿ ಅವರಾಗಿದ್ದಾರೆ. ನಮ್ಮಲ್ಲೂ ಕೊರತೆಬಿದ್ದಾಗ, ನಾವು ಪ್ರಾರ್ಥಿಸಿದಾಗ ನಮ್ಮ ಪ್ರಾರ್ಥನೆಗಳನ್ನು ತಮ್ಮ ಪುತ್ರನಲ್ಲಿ ಸಮರ್ಪಿಸಿ ಅದ್ಭುತಗಳನ್ನು ಕರುಣಿಸುವ ತಾಯಿಯೇ ‘ಹರಿಹರದ ಆರೋಗ್ಯಮಾತೆ’ ಅವರಾಗಿದ್ದಾರೆ. ಆಕೆಯ ಸುವಾರ್ತೆಯ ತಿರುಳು ‘ಯೇಸು ಕ್ರಿಸ್ತರು’. ಆಕೆಯನ್ನು ಪ್ರೀತಿಸುವ ನಾವೂ ಆಕೆಯ ಪುತ್ರ, ನಮ್ಮ ರಕ್ಷಕ ಯೇಸುವನ್ನು ಅರಿಯಬೇಕು ಹಾಗೂ ಆತನ ವಾಕ್ಯದಂತೆ ಬಾಳಬೇಕೆಂಬ ಸಂದೇಶ ತಾಯಿ ಮರಿಯ ನಮಗೆ ನೀಡುತ್ತಾರೆ.
7. ಯೇಸುವಿನ ಸುವಾರ್ತೆಯನ್ನು ನೆಚ್ಚಿಕೊಂಡ ತಾಯಿ:
ಇಂದಿಗೂ ವಿಶ್ವದ ಹಲವು ಪ್ರದೇಶಗಳಲ್ಲಿ ತಾಯಿ ಮರಿಯ ತಮ್ಮ ಪುತ್ರನ ಸುವಾರ್ತೆ ಸಾರುವ ಸುವಾರ್ತಕಿಯಾಗಿರುತ್ತಾರೆ. ಹರಿಹರ, ಬಾಂದ್ರಾ, ಶಿವಾಜಿನಗರ, ವೆಲಾಂಗಣ್ಣಿ, ಲೂರ್ದ್, ಫಾತಿಮಾ ಹಾಗೂ ಗಾರಾಬಾಂಡಲ್ ಮುಂತಾದ ಸ್ಥಳಗಳಲ್ಲಿ ದೇವರ ಮಹಿಮೆ ತೋರಿಸಿ ಕೊಟ್ಟಿರುತ್ತಾರೆ. ಸುವಾರ್ತೆಯೇ ಆಕೆಯ ಉಸಿರು, ಸುವಾರ್ತೆಯೇ ಆಕೆಯ ಜೀವನವಾಯಿತು. ದೇವರ ವಾಕ್ಯದ ಶಕ್ತಿಯಿಂದ ತುಂಬಿದ ತಾಯಿ ಅವರಾಗಿರುವುದರಿಂದ ನಮ್ಮ ಭಿನ್ನಹಗಳನ್ನು ಪ್ರಭು ಯೇಸು ಶಕ್ತಿಯಿಂದ ಪಡೆದುಕೊಳ್ಳುವ ಶಕ್ತಿ ಆಕೆಗಿದೆ.
8. ಹರಿಹರ ಆರೋಗ್ಯಮಾತೆ ನಮ್ಮ ಆಶ್ರಯದಾತೆ :
8.1 ಹರಿಹರ ಪುಣ್ಯಕ್ಷೇತ್ರದ ಮಹಿಮೆ:
ಪುರಾತನ ಕಾಲದಿಂದ ಪರಂಪರಾನುಗತವಾಗಿ ತಿಳಿದು ಬಂದಿರುವಂತೆ, ತೇಲಿಕೊಂಡು ಹೋಗುತ್ತಿದ್ದ ಆರೋಗ್ಯ ಮಾತೆಯ ಪ್ರತಿಮೆಯು ಕರ್ನಾಟಕ ರಾಜ್ಯದ ಹರಿಹರದಲ್ಲಿರುವ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಬಂದು ಆಕಸ್ಮಿಕವಾಗಿ ಜಾರಿ ಬಿದ್ದು ಮುಳುಗಿ ಪ್ರಾಣಭಯದಿಂದ ಬೇಡುತ್ತಿದ್ದ ಒಬ್ಬ ಬ್ರಾಹ್ಮಣನ ಜೀವವನ್ನು ರಕ್ಷಿಸಿತು. ಆಮೇಲೆ ಕ್ಷಯರೋಗದಿಂದಲೂ, ಬಾಲ್ಯ ಪಾರ್ಶ್ವವಾಯುವಿನಿಂದಲೂ ಬಳಲುತ್ತಿದ್ದ ಅವನ ಹೆಂಡತಿಗೂ, ಮಗುವಿಗೂ ಮಾತೆಯ ಪ್ರತಿಮೆ ಮುಟ್ಟಿದ ಕೂಡಲೇ ಗುಣವಾಯಿತೆಂದು ಪ್ರತೀತಿ. ಕೃತಜ್ಞತಾಪೂರಿತನಾದ ಆತನು ಆಗಲೇ ತನ್ನನ್ನು ಮತ್ತು ತನ್ನ ಕುಟುಂಬವನ್ನು ಆರೂಗ್ಯ ಮಾತೆಯ ಸೇವೆಗಾಗಿ ಕೊಟ್ಟು ತನ್ನ ಮನೆಯನ್ನು ಮಾತೆಯ ಮಹಿಮೆಗಾಗಿ ಸಮರ್ಪಿಸಿದನು.
8.2 ಹರಿಹರ ಪುಣ್ಯಕ್ಷೇತ್ರದ ಅದ್ಭುತಗಳು:
ಅನೇಕಾನೇಕ ಅದ್ಭುತಗಳಿಂದ ಕಠಿಣವಾದ ವ್ಯಾಧಿಗಳು ಹರಿಹರದಲ್ಲಿರುವ ಆರೋಗ್ಯಮಾತೆಯ ಅನುಗ್ರಹದಿಂದ ಗುಣಮುಖವಾದ ಉದಾಹರಣೆಗಳು ದೊರೆತಿವೆ. ಅಂದಿನಿಂದ ಹರಿಹರ ಆರೋಗ್ಯ ಮಾತೆಯ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಪ್ರತೀ ವರ್ಷ ಸೆಪ್ಟೆಂಬರ್ 8 ಕ್ಕೆ ಜರುಗುವ ಮಹೋತ್ಸವಕ್ಕೆ ಸಾವಿರಾರು ಜನರು ದೇಶ, ವಿದೇಶಗಳಿಂದ ಯಾತ್ರಾರ್ಥಿಗಳಾಗಿ ಬಂದು ಆರೋಗ್ಯ ಮಾತೆಯ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಆಕೆ ರಕ್ಷಕ ಯೇಸುವಿನಿಂದ ಅದ್ಭುತಗಳನ್ನು ಕೊಡಿಸುತ್ತಾರೆ. ಕೋಟ್ಯಾಂತರ ಜನರಿಗೆ ಆಕೆ ಆಶ್ರಯದಾತರಾಗಿದ್ದಾರೆ.
8.3 ಹರಿಹರ ಮಾತೆಯ ಚಲನಚಿತ್ರ :
ಬ್ರದರ್ ಟಿ.ಕೆ. ಜಾರ್ಜ್ ರವರ ಸಂಗೀತ, ರಚನೆ, ನಿರ್ದೇಶನದಡಿಯಲ್ಲಿ ವಂ. ಸ್ವಾಮಿ ರೋಮನ್ ಪಿಂಟೊರವರ ಅದ್ಭುತ ನಟನೆಯಲ್ಲಿ ಸಿದ್ದವಾದ ಚಲನಚಿತ್ರ ‘ಹರಿಹರ ಆರೋಗ್ಯಮಾತೆ’ 2012 ರಲ್ಲಿ ಇದರ ಬಿಡುಗಡೆಯಾತ್ತು. ಈ ಚಲನಚಿತ್ರವನ್ನು ವೀಕ್ಷಿಸಿ ಸಾವಿರಾರು ಭಕ್ತಾದಿಗಳು ಈ ಪುಣ್ಯಕ್ಷೇತ್ರಕ್ಕೆ ಬಂದಿದ್ದಾರೆ. ಇದನ್ನು ಕನ್ನಡ ಮತ್ತು ತಮಿಳು ಬಾಷೆಯಲ್ಲಿ ನಿರ್ಮಿಸಲಾಗಿದೆ.
8.4 ಹರಿಹರ ಪುಣ್ಯಕ್ಷೇತ್ರದ ಪಕ್ಷಿನೋಟ :
• ಪುಣ್ಯಕ್ಷೇತ್ರ ಸುಂದರ, ಭವ್ಯ ಮಹಾಲಯ ಸರ್ವರಿಗೂ ಆಕರ್ಷಣೆಯ ಕೇಂದ್ರಬಿಂದು
• ಯಾತ್ರಿಕರ ಮಾತೆಯ ಗುಮ್ಮಟ
• ಪುಣ್ಯಕ್ಷೇತ್ರದ ಮಹಾದ್ವಾರ
• ಸುಂದರವಾದ ನೆಲ ಹಾಸು, ಪುಣ್ಯಕ್ಷೇತ್ರದ ಸೌಂದರ್ಯವನ್ನು ಹೆಚ್ಚಿಸಿದೆ
• ಮಾತೆಯ ಪುಣ್ಯ ಜೀವನ ವೃತ್ತಾಂತ ಪುಣ್ಯ ಮಂಟಪಗಳು
• ಕಲ್ವಾರಿ ಬೆಟ್ಟದ ಪ್ರತಿಕೃತಿ
• ಗೋದಲಿ (ಯೇಸುವಿನ ಜನನದ) ಯ ಪ್ರತಿಕೃತಿ
• ಕ್ರಿಸ್ತನ ಪರಮಪ್ರಸಾದ ಆರಾಧನ ದೇವಳ
• ಮಾತೆ ಮರಿಯಳ ಅಲಂಕಾರ ವೇದಿಕೆ (ಸೀರೆಯ ಕಾಣಿಕೆ)
• ಹರಿಹರ ಮಾತೆಯ ಅದ್ಭುತ ಸ್ವರೂಪದ ತಾಣ
• ಇತಿಹಾಸ ಪ್ರದರ್ಶನ ಮಂದಿರ
• ಚಿತ್ರ ದರ್ಶನ ಮಂದಿರ
• ಮರಿಯ ಸದನ ಸಭಾಂಗಣ
• ಸಿ.ಸಿ.ಟಿ.ವಿ ಕಣ್ಗಾವಲು ವ್ಯವಸ್ಥೆ
• ಸುಸಜ್ಜಿತ ಮೂಲ ಸೌಕರ್ಯಗಳು
9. ಪ್ರತ್ಯೇಕವಾದ ವರಗಳನ್ನು ಪಡೆಯುವ ಪ್ರಾರ್ಥನೆ :
ನನ್ನ ಅತಿ ಪ್ರೀತಿಯ ತಾಯೇ ಇಗೋ ನಿಮ್ಮ ಪಾದದ ಬಳಿ ನಿಂತಿರುತ್ತೇನೆ. ನಾನು ಈ ಕೋರಿಕೆಯನ್ನು ನಿಮ್ಮ ಹತ್ತಿರ ಬೇಡಲು ಬಂದಿರುತ್ತೇನೆ. (ಇಲ್ಲಿ ನಿಮ್ಮ ಪ್ರತ್ಯೇಕವಾದ ಕೋರಿಕೆಯನ್ನು ನಿವೇದಿಸಿರಿ) ನನ್ನ ಈ ಕೋರಿಕೆಯನ್ನು ನಿಮ್ಮ ಪುತ್ರರಾದ ದಿವ್ಯ ಯೇಸುವಿನ ಬಳಿಗೆ ಸಮರ್ಪಿಸಿ, ನೀವು ನನಗಾಗಿ ಬೇಡಿದರೆ ನನ್ನ ಪ್ರಾರ್ಥನೆಯು ಎಂದಿಗೂ ನಿರಾಕರಿಸುವುದಿಲ್ಲ. ಪ್ರಿಯ ತಾಯೇ ನಾನು ದೇವರ ಚಿತ್ತವನ್ನು ಎಲ್ಲದರಲ್ಲಿ ಕಾಣಬೇಕೆಂದು ನಿಮ್ಮ ಇಚ್ಛೆ. ನಾನು ನನ್ನನ್ನು ಸಂಪೂರ್ಣವಾಗಿ ಮುಗ್ಧ ನಂಬಿಕೆಯಿಂದ ದೇವರ ಪವಿತ್ರ ಚಿತ್ತದ ಪ್ರಕಾರ ನನ್ನ ಕೋರಿಕೆಯನ್ನು ನಿಮ್ಮಲ್ಲಿ ಇಡುತ್ತೇನೆ. ಆದರೆ ನನ್ನ ಕೋರಿಕೆಯು ನೆರವೇರದಿದ್ದರೂ ನನ್ನ ಆತ್ಮಕ್ಕೆ ಇನ್ನೂ ಉತ್ತಮವಾದ ವರಗಳನ್ನು ದಯಪಾಲಿಸಿರೆಂದು ಪ್ರಾರ್ಥಿಸುತ್ತೇವೆ. ದಯಾಮರಿಯೇ ಮಾನವ ಕುಲದ ಸಹಾಯಕಿಯೇ ನನ್ನ ಪ್ರಾರ್ಥನೆಯನ್ನು ಆಲಿಸಿ, ನನ್ನ ಪ್ರೇಮವನ್ನು ಮತ್ತು ನಂಬಿಕೆಯನ್ನು ಅಂಗಿಕರಿಸಿರಿ. ಎಡಬಿಡದ ಸಹಾಯ ತಾಯೇ, ನಿಮ್ಮ ಪ್ರಿಯ ಮಗನಾದ ಯೇಸುವಿನ ಮಮತೆಯಿಂದ ನನ್ನೀ ಪ್ರಾರ್ಥನೆಯನ್ನು ನೆರವೇರಿಸಿರಿ. --- ಆಮೇನ್.
ಹರಿಹರದ ಆರೋಗ್ಯ ಮಾತೆಯೇ ನಮಗಾಗಿ ಪ್ರಾರ್ಥಿಸಿರಿ.